Toxic : ಕೇರಳದಲ್ಲಿ ‘ಟಾಕ್ಸಿಕ್’ ಅಬ್ಬರ ಶುರು: ಯಶ್ ಸಿನಿಮಾದ ವಿತರಣಾ ಹಕ್ಕು ಬಿಕರಿ, 350 ಥಿಯೇಟರ್ಗಳಲ್ಲಿ ರಿಲೀಸ್!

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಭರ್ಜರಿ ಆಕ್ಷನ್ ಸಿನಿಮಾ ‘ಟಾಕ್ಸಿಕ್’ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಕರುನಾಡು ಮಾತ್ರವಲ್ಲದೆ ‘ದೇವರ ಸ್ವಂತ ನಾಡು’ ಕೇರಳದಲ್ಲೂ ಯಶ್ ಬಾಸ್ ಹವಾ ಜೋರಾಗಿದ್ದು, ಮಲಯಾಳಂ ಮಂದಿ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
ಇದೀಗ ಚಿತ್ರತಂಡದಿಂದ ದೊಡ್ಡ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ‘ಟಾಕ್ಸಿಕ್’ ಚಿತ್ರದ ಕೇರಳ ವಿತರಣಾ ಹಕ್ಕನ್ನು ಪ್ರತಿಷ್ಠಿತ ಇ4 ಎಂಟರ್ಟೇನ್ಮೆಂಟ್ ಸಂಸ್ಥೆ ಬೃಹತ್ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ. ಮುಖೇಶ್ ಮೆಹ್ತಾ ಹಾಗೂ ಸಿ.ವಿ. ಸಾರಥಿ ಮಾಲೀಕತ್ವದ ಈ ಸಂಸ್ಥೆ ಈಗಾಗಲೇ ಕೇರಳದಲ್ಲಿ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ರಿಲೀಸ್ ಮಾಡಿದ ಹೆಗ್ಗಳಿಕೆ ಹೊಂದಿದೆ.
ಮೂಲಗಳ ಪ್ರಕಾರ, ಕೇರಳದಾದ್ಯಂತ ಬರೋಬ್ಬರಿ 350 ಸ್ಕ್ರೀನ್ಗಳಲ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಈ ಸಂಸ್ಥೆ ಮಾಡಿಕೊಡಲಿದೆ. ಇದೊಂದು ಐತಿಹಾಸಿಕ ರಿಲೀಸ್ ಆಗಲಿದ್ದು, ಕೇರಳ ಬಾಕ್ಸ್ ಆಫೀಸ್ ಧೂಳೀಪಟ ಆಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.
ನೆನಪಿರಲಿ, ‘ಕೆಜಿಎಫ್: ಚಾಪ್ಟರ್ 2’ ಮೂಲಕ ಯಶ್ ಅವರು ಕೇರಳದಲ್ಲಿ ಬಿಗ್ ಫ್ಯಾನ್ ಬೇಸ್ ಸೃಷ್ಟಿಸಿದ್ದರು. ಮಲಯಾಳಂಯೇತರ ಸಿನಿಮಾಗಳ ಪೈಕಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಈಗಲೂ ಕೆಜಿಎಫ್ 2 ಹೆಸರಿನಲ್ಲೇ ಇದೆ. ಹೀಗಾಗಿಯೇ ‘ಟಾಕ್ಸಿಕ್’ ಮೇಲೆ ಅಲ್ಲಿನ ಪ್ರೇಕ್ಷಕರಿಗೆ ವಿಪರೀತ ಕ್ರೇಜ್ ಇದೆ.
“ಇಷ್ಟೊಂದು ದೊಡ್ಡ ಮಟ್ಟದ ಸಿನಿಮಾವನ್ನು ಕೇರಳದಲ್ಲಿ ವಿತರಿಸುವ ಜವಾಬ್ದಾರಿ ಸಿಕ್ಕಿರುವುದು ನಮಗೆ ಹೆಮ್ಮೆಯ ವಿಚಾರ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ಗೆ ನಮ್ಮ ಕೃತಜ್ಞತೆಗಳು” ಎಂದು ಇ4 ಎಂಟರ್ಟೇನ್ಮೆಂಟ್ನ ಮುಖೇಶ್ ಮೆಹ್ತಾ ಹರ್ಷ ವ್ಯಕ್ತಪಡಿಸಿದ್ದಾರೆ.
ಕೇವಲ ಕೇರಳ ಮಾತ್ರವಲ್ಲ, ಉತ್ತರ ಭಾರತದಲ್ಲಿ ಖ್ಯಾತ ವಿತರಕ ಅನಿಲ್ ತದಾನಿ ಹಾಗೂ ತೆಲುಗು ರಾಜ್ಯಗಳಲ್ಲಿ ಟಾಲಿವುಡ್ ಕುಳ ದಿಲ್ ರಾಜು ಅವರು ‘ಟಾಕ್ಸಿಕ್’ ವಿತರಣೆಯ ಜವಾಬ್ದಾರಿ ಹೊತ್ತಿದ್ದು, ಚಿತ್ರದ ಪ್ಯಾನ್-ಇಂಡಿಯಾ ರೇಂಜ್ ಏನೆಂದು ಸಾಬೀತುಪಡಿಸುತ್ತಿದೆ.
ಗೀತು ಮೋಹನ್ದಾಸ್ ಆಕ್ಷನ್ ಕಟ್ ಹೇಳಿರುವ ಈ ಮೆಗಾ ಪ್ರಾಜೆಕ್ಟ್ಗೆ ಯಶ್ ಕೂಡ ಕಥೆ ಬರೆದಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಏಕಕಾಲಕ್ಕೆ ಶೂಟ್ ಆಗಿರುವ ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಮಾರ್ಚ್ 19ರಂದು ಜಗತ್ತಿನಾದ್ಯಂತ ಅಬ್ಬರಿಸಲಿದೆ.
