‘ವೀರ ಕಂಬಳ’ದಿಂದ ವೀರೇಂದ್ರ ಹೆಗ್ಗಡೆ ದೃಶ್ಯ ಕತ್ತರಿಸಲು ಬೆದರಿಕೆ! ಅಸಲಿ ಸತ್ಯ ಬಿಚ್ಚಿಟ್ಟ ರಾಜೇಂದ್ರ ಸಿಂಗ್ ಬಾಬು
ಮುಖ್ಯಾಂಶಗಳು:
-
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮುಂಬರುವ ‘ವೀರ ಕಂಬಳ’ ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ.
-
ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಬರುವ ಹೆಗ್ಗಡೆಯವರ ದೃಶ್ಯಗಳನ್ನು ಕತ್ತರಿಸುವಂತೆ ನಿರ್ದೇಶಕರಿಗೆ ಇತ್ತೀಚೆಗೆ ಕೆಲವರಿಂದ ಬೆದರಿಕೆ ಕರೆಗಳು ಬಂದಿದ್ದವು.
-
ಯಾವುದೇ ಬೆದರಿಕೆಗಳಿಗೆ ಸೊಪ್ಪು ಹಾಕದ ನಿರ್ದೇಶಕರು, ಆ ದೃಶ್ಯಗಳನ್ನು ಸಿನಿಮಾದಲ್ಲಿ ಹಾಗೆಯೇ ಉಳಿಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ತುಳುನಾಡಿನ ಜಾನಪದ ಕ್ರೀಡೆ ಕಂಬಳದ ಕುರಿತಾಗಿ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಆಕ್ಷನ್ ಕಟ್ ಹೇಳಿರುವ ‘ವೀರ ಕಂಬಳ’ (Veera Kambala) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಟ ಆದಿತ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಬಣ್ಣಹಚ್ಚಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಆದರೆ, ಈ ಸಿನಿಮಾದ ಸುತ್ತ ಈಗೊಂದು ಅಚ್ಚರಿಯ ಹಾಗೂ ಆಘಾತಕಾರಿ ಬೆಳವಣಿಗೆ ನಡೆದಿದೆ! ಹೌದು, ಚಿತ್ರದಲ್ಲಿ ವೀರೇಂದ್ರ ಹೆಗ್ಗಡೆಯವರು ನಟಿಸಿರುವ ದೃಶ್ಯಗಳನ್ನು ತೆಗೆದುಹಾಕುವಂತೆ ನಿರ್ದೇಶಕರಿಗೆ ಬೆದರಿಕೆ ಕರೆಗಳು ಬಂದಿದ್ದವಂತೆ. ಈ ಸ್ಫೋಟಕ ಮಾಹಿತಿಯನ್ನು ಸ್ವತಃ ರಾಜೇಂದ್ರ ಸಿಂಗ್ ಬಾಬು ಅವರು ಇತ್ತೀಚೆಗೆ ಟಿವಿ9 ವಾಹಿನಿಯ ಜೊತೆಗಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ವೀಕ್ಷಕರಿಗೆ ಒಂದು ಪ್ರಬಲವಾದ ಸಂದೇಶ ಸಾರುವ, ಬಹಳ ಘನತೆಯುಳ್ಳ ಪಾತ್ರವೊಂದರ ಅಗತ್ಯ ನಿರ್ದೇಶಕರಿಗಿತ್ತು. ಬಾಲ್ಯದಿಂದಲೇ ವೀರೇಂದ್ರ ಹೆಗ್ಗಡೆಯವರ ಒಡನಾಟ ಹೊಂದಿದ್ದ, ಜೊತೆಯಾಗಿ ಕ್ರಿಕೆಟ್ ಕೂಡ ಆಡಿದ್ದ ಬಾಬು ಅವರು ನೇರವಾಗಿ ಹೋಗಿ ಹೆಗ್ಗಡೆಯವರನ್ನೇ ಈ ಪಾತ್ರಕ್ಕಾಗಿ ಕೇಳಿಕೊಂಡಿದ್ದರು. ಚಿತ್ರದ ಒಟ್ಟಾರೆ ಆಶಯವನ್ನು ಮೆಚ್ಚಿ ಅವರು ಕೂಡ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ಆದರೆ, ಕಳೆದ ಕೆಲ ತಿಂಗಳ ಹಿಂದೆ ಕೆಲವರು ಕರೆ ಮಾಡಿ, “ಸಿನಿಮಾದಿಂದ ಹೆಗ್ಗಡೆಯವರ ದೃಶ್ಯಗಳನ್ನು ಕೂಡಲೇ ತೆಗೆದುಹಾಕಬೇಕು” ಎಂದು ಬೆದರಿಕೆ ಹಾಕಿದ್ದರಂತೆ. ಈ ಬ್ಲ್ಯಾಕ್ಮೇಲ್ಗೆ ಕಿಂಚಿತ್ತೂ ಜಗ್ಗದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ತಾನು ಯಾವುದೇ ಕಾರಣಕ್ಕೂ ಇಂತಹ ಬೆದರಿಕೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಈ ಮೂಲಕ ಹೆಗ್ಗಡೆಯವರ ಆ ಅದ್ಭುತ ದೃಶ್ಯಗಳು ಸಿನಿಮಾದಲ್ಲಿ ಹಾಗೆಯೇ ಇರಲಿವೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ!

