ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದ ‘ಲ್ಯಾಂಡ್ಲಾರ್ಡ್’ ಸಿನಿಮಾ ಈಗ ಒಟಿಟಿಗೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಮಾರ್ಚ್ 19ರಿಂದ ಜೀ5 ಒಟಿಟಿ ವೇದಿಕೆಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಯುಗಾದಿ ಹಬ್ಬದ ಪ್ರಯುಕ್ತ ಈ ಚಿತ್ರವನ್ನು ಡಿಜಿಟಲ್ ಮೂಲಕ ಬಿಡುಗಡೆ ಮಾಡಲಾಗುತ್ತಿದೆ.

ಜನವರಿ 23ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ದುನಿಯಾ ವಿಜಯ್, ರಚಿತಾ ರಾಮ್, ಶಿಶಿರ್ ಬೈಕಾಡಿ, ರಿತನ್ಯ ವಿಜಯ್, ಉಮಾಶ್ರೀ ಮತ್ತು ರಾಜ್ ಬಿ. ಶೆಟ್ಟಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಜಡೇಶ್ ಕೆ. ಹಂಪಿ ನಿರ್ದೇಶನದ ಈ ಚಿತ್ರ 1980ರ ಗ್ರಾಮೀಣ ಕರ್ನಾಟಕದ ಹಿನ್ನೆಲೆಯ ಕಥೆಯನ್ನು ಹೇಳುತ್ತದೆ. ‘ಸಾರಥಿ ಫಿಲ್ಮ್ಸ್’ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣವಾಗಿದೆ. ಸಂಪತ್ ಮೈತ್ರೇಯ ಮತ್ತು ಭಾವನಾ ರಾವ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ‘ಕೊಡಲಿ ರಾಚಯ್ಯ’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ರಾಚಯ್ಯ ಒಬ್ಬ ಶಾಂತ ಸ್ವಭಾವದ ವ್ಯಕ್ತಿ. ಹೆಚ್ಚು ಮಾತನಾಡದೇ ತನ್ನ ಭಾವನೆಗಳನ್ನು ಒಳಗೊಳಗೆ ವ್ಯಕ್ತಪಡಿಸುವ ಪಾತ್ರ ಇದು. ಈ ಪಾತ್ರ ನನಗೆ ವಿಭಿನ್ನ ಅನುಭವ ನೀಡಿತು. ಈಗ ಜೀ5ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು ಸಂತೋಷ ತಂದಿದೆ. ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ,” ಎಂದಿದ್ದಾರೆ.
ನಟಿ ರಚಿತಾ ರಾಮ್ ಮಾತನಾಡಿ, “ಈ ಚಿತ್ರ ಸರಳವಾಗಿ ಕಾಣಿಸಿಕೊಂಡರೂ ಅದರೊಳಗಿನ ಭಾವನೆಗಳು ತುಂಬಾ ಆಳವಾಗಿವೆ. ಕಥೆಯಲ್ಲಿ ಭಾವನಾತ್ಮಕ ಅಂಶಗಳು ಹೆಚ್ಚು. ನನ್ನ ಪಾತ್ರವೂ ವಿಶೇಷವಾಗಿದೆ,” ಎಂದು ತಿಳಿಸಿದ್ದಾರೆ. ಉಮಾಶ್ರೀ ಅವರ ಪಾತ್ರ ಕೂಡ ಚಿತ್ರದ ಮುಖ್ಯ ಆಕರ್ಷಣೆಯಾಗಿದೆ.
ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಈ ಸಿನಿಮಾದಲ್ಲಿನ ಎಲ್ಲಾ ಕಲಾವಿದರ ಅಭಿನಯಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿತ್ತು. ವಿಶೇಷವಾಗಿ ವಿಲನ್ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರ ಅಭಿನಯ ಪ್ರೇಕ್ಷಕರ ಗಮನ ಸೆಳೆದಿತ್ತು.
ಈಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ, ಹೊಸ ಪ್ರೇಕ್ಷಕರು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಈ ಸಿನಿಮಾಗೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.
